ಕಸುಪಟ್ಟಿ ಉರಿತ

 ಮೂಳೆಗೆ ಸ್ನಾಯುವನ್ನು ಬಿಗಿದಂಟಿಸುವ ಕಂಡರದ (ಟೆಂಡನ್) ಸುತ್ತಲೂ ಚೀಲದಂತಿರುವ ಒರೆಕವಚದ (ಷೀತ್) ಉರಿತ (ಟೆಂಡಿನೈಟಿಸ್).  ಬೆರಳಿಗೆ ಉಗುರುಸುತ್ತಾಗಿ ತೀರ ಆಳಕ್ಕೆ ಕೀವು ಸೇರಿದಾಗ ಹೀಗಾಗುವುದು ಸಾಮಾನ್ಯ.  ತೆಳುಪೊರೆಯಿಂದಾಗಿರುವ ಈ ಒರೆಕವಚದ ಮೂಲಕ ಕೀವು ಮಣಿಕಟ್ಟಿಗೂ ಹರಡಿಕೊಳ್ಳುವ ಅಪಾಯವಿರುತ್ತದೆ.  ಒರೆಕವಚದಲ್ಲಿ ಉರಿತವೆದ್ದು ಕೀವುಗೂಡಿದಾಗ ಬೆರಳುಗಳನ್ನು ಇನ್ನು ಮುಂದೆ ಸರಾಗವಾಗಿ ಆಡಿಸದಂತಾಗುವುದು.  ಎಲುಬುಗಳ ನಡುವಣಕೀಲುಗಳು ಸರಾಗವಾಗಿ ಆಡಿಸಲಿರುವ ಹಾಗೇ ಇಲ್ಲೂ ರಚನೆಯಾಗಿರುವುದು.  ಕಂಡರದ ಅಸಹಜ ಬಳಕೆಯಿಂದ ಕೆರಳಿದಾಗ ಉರಿತವೇಳುತ್ತದೆ.  ವಿರಳವಾಗಿ, ಏಕಾಣುಜೀವಿಗಳ ದಾಳಿಯಿಂದ ಸೋಂಕು ಹತ್ತಬಹುದು.  ಬೆರಳಚ್ಚುಗಾರರಲ್ಲಿ ಮಣಿಕಟ್ಟಿನಲ್ಲೂ ಕಲ್ಲುಕುಟಿಗರು, ಗಣಿಕೆಲಸಗಾರರಲ್ಲಿ ಹೆಬ್ಬೆಟ್ಟಲ್ಲೂ ಕೂಲಿಗಾರರಲ್ಲಿ ಹೆಗಲಿನಲ್ಲೂ ಆಗುವಂತೆ, ಕೆಲವು ಕಸಬುಗಳಲ್ಲಿ ಕಸುಪಟ್ಟಿಯುರಿತ ಸಾಮಾನ್ಯ.  ಹೀಗಾದೆಡೆಯಲ್ಲಿ ಊದಿಕೊಂಡು ಕೆಂಪೇರಿ ಆ ಭಾಗವನ್ನು ಆಡಿಸಿದರೆ ಬಲು ನೋವಿಡುವುದು.  ಅಲ್ಲದೆ ಒರೆಕವಚದಲ್ಲಿ ಕೀವು ತುಂಬಿದರೆ ಆ ಭಾಗ ಅಲುಗಾಡದೆ ಹಿಡಿದಂತಾಗಿರುತ್ತದೆ.   ಆಡುವಾಗ ಕರಗಟ್ಟುವುದನ್ನು ಮುಟ್ಟಿ ತಿಳಿಯಬಹುದು.  ಶಸ್ತ್ರಚಿಕಿತ್ಸೆಯಿಂದ ಕೀವನ್ನು ಹೊರಡಿಸಿ ವಾಸಿಮಾಡಿದರೂ ಎಂದಿನಂತೆ ಸರಾಗವಾಗಿ ಆಡುವುದು ಕಷ್ಟ. ಉರಿತವಾದ ಕಂಡರ, ಅದರ ಒರೆಕವಚಗಳಿಗೆ ಬಿಡುವು ಕೊಡುವುದೇ ಚಿಕಿತ್ಸೆ ಇದಕ್ಕೆ ಆ ಭಾಗಕ್ಕೆ ಕಟುಪಟ್ಟಿಗಳು, ದಬ್ಬೆಕಟ್ಟುಗಳನ್ನು ಅಲುಗಾಡದ ಹಾಗೆ ಕಟ್ಟಿಡಬಹುದು.  ಉರಿತ ಇಳಿದು ಹೋಗಿ ಬರಬರುತ್ತ ಆಡುವುದೂ ಸರಾಗವಾಗಬಹುದು.  ಕೆಲವೇಳೆ, ಹೈಡ್ರೊಕಾರ್ಟಿಸೋನ್ ಮದ್ದು ಚುಚ್ಚಿದರೆ ಬೇಗನೆ ಗುಣಕಾರಿಯಾಗುವುದು.  ಮತ್ತೆ ಮರುಕಳಿಸುವುದೂ ಸಾಮಾನ್ಯ. ಮತ್ತೆ ಮತ್ತೆ ಹೀಗಾದರೆ, ಅದು ಮಂದವಾಗಿ ಗಡುಸಾಗಿ ಕಂಡರದ ಚಲನೆಗೇ ಅಡ್ಡಿಯಾಗಬಹುದು.  ಕೈಯಲ್ಲೋ ಪಾದದಲ್ಲೋ ಕಂಡುಬುರವ ಬೇರೂರಿದ ಕಸುಪಟ್ಟಿಯುರಿತಕ್ಕೆ ಸಾಮಾನ್ಯ ಕಾರಣ ಕ್ಷಯ.   

 (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ